ಬಾಣಾವರ
ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಒಂದು ಹೋಬಳಿ ಮತ್ತು ಆಡಳಿತ ಕೇಂದ್ರಪಟ್ಟಣ. ಅರಸೀಕೆರೆಗೆ ವಾಯವ್ಯದಲ್ಲಿ 14 ಕಿಮೀ ದೂರದಲ್ಲಿದೆ. ಬೆಂಗಳೂರು-ಹುಬ್ಬಳ್ಳಿ ರೈಲು ಮಾರ್ಗದ ಒಂದು ನಿಲ್ದಾಣ. ಜನಸಂಖ್ಯೆ 8,327 (2001).

1883ರ ತನಕವೂ ಬಾಣಾವರ ಇದೇ ಹೆಸರಿನ ತಾಲ್ಲೂಕು ಕೇಂದ್ರವಾಗಿದ್ದು ಕಡೂರು ಜಿಲ್ಲೆಗೆ ಸೇರಿತ್ತು. ಅರಸೀಕೆರೆ ತಾಲ್ಲೂಕು ರಚನೆಯಾದಾಗ (1886) ಆ ತಾಲ್ಲೂಕಿನ ವ್ಯಾಪ್ತಿಗೆ ಒಳಪಟ್ಟಿತು. 1924ರಲ್ಲಿ ಪೌರಸಭೆ ಸ್ಥಾಪನೆಯಾಯಿತು.

ಇಲ್ಲಿನ ಬಾಣೇಶ್ವರ ದೇವಾಲಯದಿಂದ ಈ ಊರಿಗೆ ಬಾಣಾವರ ಎಂಬ ಹೆಸರು ಬಂದಿರಬೇಕೆಂಬ ಅಭಿಪ್ರಾಯವಿದೆ. ಲಕ್ಷ್ಮಣ ಆಯÁಸದಿಂದ ಹೊರಲಾರದೆ ಕೆಳಗೆ ಹಾಕಿಕೊಂಡು ಹೋಗಿದ್ದ ಬಾಣಗಳನ್ನು ರಾಮ ಇಲ್ಲಿ ಎತ್ತಿಕೊಂಡ ಕಾರಣ ಈ ಸ್ಥಳಕ್ಕೆ ಬಾಣಹೊರು ಅಥವಾ ಬಾಣಾವರ ಎಂಬ ಹೆಸರು ಬಂದಿತೆಂದು ಐತಿಹ್ಯ. ಬಾಣ ದೊರೆಗಳಿಗೂ ಈ ಊರಿಗೂ ಏನೋ ಸಂಬಂಧವಿರಬೇಕು ಎಂಬ ಅಭಿಪ್ರಾಯವೂ ಇದೆ. ಹನ್ನೊಂದನೆಯ ಶತಮಾನದಲ್ಲಿ ಈ ಊರು ಹರಿಹರ ಸೋಮೇಶ್ವರರಾಯ ಆಳುತ್ತಿದ್ದ ಪ್ರದೇಶದ ಮುಖ್ಯಸ್ಥಳವಾಗಿತ್ತೆಂದು ಪ್ರತೀತಿ. ತರುವಾಯ ಬಾಣಾವರ ಹೊಯ್ಸಳ ರಾಜ್ಯಕ್ಕೆ ಸೇರಿತು. ಆಗ ಇದು ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತೆಂದೂ ಆ ಕಾಲದಲ್ಲಿ ಇಲ್ಲಿ ಚಟ್ಟೇಶ್ವರ ದೇವಾಲಯವನ್ನು ಕಟ್ಟಿಸಲಾಯಿತೆಂದು ಇಲ್ಲಿರುವ ಹೊಯ್ಸಳರ ಶಾಸನದಿಂದ ತಿಳಿದುಬರುತ್ತದೆ. ವಿಜಯನಗರ ಪತನಾನಂತರ ಇಕ್ಕೇರಿಯ ನಾಯಕರ ಆನಂತರ 1690ರಲ್ಲಿ ಮೈಸೂರಿನ ಚಿಕ್ಕದೇವರಾಜ ಒಡೆಯರ ಆಡಳಿತಕ್ಕೆ ಸೇರಿತು.		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ